ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು || ಹೊಸ ||
ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ || ಹೊಸ ||
ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿರಲು ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ || ಹೊಸ ||
ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ || ಹೊಸ ||
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್
No comments:
Post a Comment